Friday, May 5, 2017

ನನ್ನ ಮುದ್ದಿನ ಸ್ವರಾಳಿಗೆ..


ತೋಳಾಗ ಮಲಗ್ಯಾಳ
ನಡುನಡುವೆ ನಗತಾಳ
ಹುಬ್ಬು ಗಂಟ್ಟಾಕಿ ಬಿಚ್ಚತಾಳ ನನ್ನ ಕೂಸ
ನಿದ್ದ್ಯಾಗ ನೂರು ಭಾವ ತೋರ್ತಾಳ।।

ಮುಚ್ಚಿದ ರೆಪ್ಪೆ ಮ್ಯಾಲೆ
ನನ್ನ ಕನಸು ಮಲಗ್ಯಾವ
ತೆರೆದಾಗ ಗರಿಗೆದರಿ ಕುಣಿತಾವ ಮನದಾಗ
ಹಿಗ್ಗಿನ ಮಳೆಯ ಸುರಿಸ್ಯಾವ।।

ಮೈಮುರಿದು ನಕ್ಕಾಗ
ನಕ್ಷತ್ರ ಚೆಲ್ಲ್ಯಾವ
ಬಚ್ಚಬಾಯಿಯ ನಗು ಜೊಲ್ಲ ಮುತ್ತನು ಸುರಿಸಿ
ಎದಿಯೊಳಗೆ ಬೆಳದಿಂಗಳು ತುಂಬ್ಯಾವ।।

ಮುದ್ದು ಮುಖ ಮಾಡಿ ಸುದ್ದಿ ಹೇಳುವ ಬಾಯಿ
ಚಪಚಪ ಚೀಪುವ ಪುಟ್ಟ ಬೆರಳಿನ ಕೈಯಿ
ಲೊಚ ಲೊಚ ಮುದ್ದು ಕೊಡಲು ಕರದಾವ||

ದಿನಕೊಂದು ಹೊಸ ಆಟ ಕ್ಪಣಕೊಂದು ಹೊಸ ನೋಟ
ಅಪ್ಪಿಕೊಳಲು ಮೆತ್ತನೆ ಗೊಂಬಿಯ ಮಾಟಕ್ಕ
ಗಳಿಗೆ ಗಳಿಗೆಗೆ ನಮ್ಮ ಬೆರಗಿನೋಟ।।

- ವಿದ್ಯಾ ಶಿರಹಟ್ಟಿ


No comments:

Post a Comment